ಉಳಿತಾಯ

	ಅನುಭೋಗ ವರ್ಜನೆ: ಭವಿಷ್ಯದ ಬಳಕೆಗಾಗಿ ಪ್ರಸಕ್ತ ವರಮಾನದಲ್ಲಿ ಒಂದು ಭಾಗವನ್ನು ಎತ್ತಿಡುವ ಕ್ರಿಯೆ; ಅನುಭೋಗ ಹಾಗೂ ತೆರಿಗೆಗಳ ಪಾವತಿಗಾಗಿ ಖರ್ಚು ಮಾಡಿದ ಮೇಲೆ ಉಳಿಯತಕ್ಕದ್ದು (ಸೇವಿಂಗ್). ವರಮಾನವನ್ನು ಪಡೆಯುವ ವ್ಯಕ್ತಿಗಳು, ಕುಟುಂಬಗಳು, ವ್ಯಾಪಾರಿ ಸಂಸ್ಥೆಗಳೇ ಮುಂತಾಗಿ ಯಾರಾದರೂ ಉಳಿತಾಯ ಮಾಡುವುದು ಸಾಧ್ಯ. ವ್ಯಕ್ತಿ ಸಂಸ್ಥೆಗಳಿಗಿಂತ ಭಿನ್ನವಾಗಿರುವ ಸರ್ಕಾರ ವೆಚ್ಚ ಮಾಡದೆ ಉಳಿಸಿದ್ದನ್ನು ಉಳಿತಾಯವೆನ್ನಬಹುದು ಎಂಬ ಬಗ್ಗೆ ಅರ್ಥಶಾಸ್ತ್ರಜ್ಞರಲ್ಲಿ ಒಮ್ಮತವಿಲ್ಲ. ಆದರೆ ಒಟ್ಟು ರಾಷ್ಟ್ರ ಒಟ್ಟು ವರಮಾನಗಳಿಂದ ಅವುಗಳ ಖರ್ಚು ಹಾಗೂ ತೆರಿಗೆಗಳನ್ನೆಲ್ಲ ಕಳೆದರೆ ಉಳಿಯುವುದೇ ರಾಷ್ಟ್ರೀಯ ಉಳಿತಾಯ.

	ಉಳಿತಾಯಕ್ಕೂ ವರಮಾನಕ್ಕೂ ನೇರ ಸಂಬಂಧವುಂಟು. ವರಮಾನ ಹೆಚ್ಚಿದಷ್ಟೂ ಹೆಚ್ಚು ಉಳಿತಾಯ ಸಾಧ್ಯ. ಉಳಿತಾಯ ಮಾಡುವ ಪ್ರವೃತ್ತಿಯೂ ಬಡ್ಡಿಯ ದರವೂ ಉಳಿತಾಯದ ಇನ್ನೆರಡು ಮುಖ್ಯ ನಿರ್ಣಾಯಕಗಳು. ಒಂದು ಕೊನೆಯಲ್ಲಿ ವರಮಾನಕ್ಕೂ ಉಳಿತಾಯಕ್ಕೂ ಸಂಬಂಧವಿರುವ ಹಾಗೆ ಇನ್ನೊಂದು ಕೊನೆಯಲ್ಲಿ ಉಳಿತಾಯಕ್ಕೂ ಬಂಡವಾಳ ನಿಯೋಜನೆಗೂ ಸಂಬಂಧವುಂಟು. ಇದು ಒಂದು ಅರ್ಥವ್ಯವಸ್ಥೆಯ ವರಮಾನದ ನಿರ್ಣಾಯಕಗಳಲ್ಲೊಂದು. ಈ ಕಾರಣದಿಂದಲೇ ಉಳಿತಾಯಕ್ಕೆ ಆರ್ಥಿಕವಾಗಿ ಹೆಚ್ಚಿನ ಮಹತ್ತ್ವವುಂಟು. ಉಳಿತಾಯವಾದ ಹಣ ನಿಜಬಂಡವಾಳವಾಗಿ ಪರಿವರ್ತನೆ ಹೊಂದಿದಾಗಲೇ, ಎಂದರೆ ಅದನ್ನು ಉತ್ಪಾದನೆಯಲ್ಲಿ ತೊಡಗಿಸುವುದು ಸಾಧ್ಯವಾದಾಗಲೇ, ಅದು ಸಾರ್ಥಕವಾಗುತ್ತದೆ. ಆಗಲೇ ಅದು ಉಳಿತಾಯವೆನಿಸಿಕೊಳ್ಳುತ್ತದೆ. ಆದರೆ ಹೀಗೆ ತೊಡಗಿಸುವುದು ಸಾಧ್ಯವಾಗದಂತೆ ಬೈತಿಟ್ಟ ಹಣ ಉಳಿತಾಯವೆನಿಸುವುದಿಲ್ಲ. ಅದು ಸಮಾಜಘಾತಕ ಶಾಸ್ತ್ರ ದೃಷ್ಟಿಯಿಂದ ಬಲು ಮುಖ್ಯ. ಜಿಪುಣನಾದವ ಹಣವನ್ನು ಬೈತಿಟ್ಟಾಗ ಅವನಿಗೆ ಅದರಲ್ಲೇ ತೃಪ್ತಿ. ಪ್ರಕೃತದಲ್ಲಿ ಅನುಭೋಗಿಸದೆ ವರಮಾನವನ್ನು ಹಿಡಿದಿಟ್ಟಾಗ ಇದು ಸಂಕೇತಿಸುವ ಪ್ರಮಾಣದ ಸರಕು ಸೇವೆಗಳನ್ನು ಹಿಮ್ಮೊಗನಾಗಿ ತಿರುಗಿಸಿದಂತಾಗುತ್ತದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲದ ಈ ಕ್ರಮದಿಂದ ಆರ್ಥಿಕ ಚಟುವಟಿಕೆಯ ತಾಳ ತಪ್ಪುತ್ತದೆ; ಹಾಳತ ಕೆಡುತ್ತದೆ.

ಉಳಿತಾಯದ ಉದ್ದೇಶಗಳು: ವ್ಯಕ್ತಿಗಳು ಮಾಡುವ ಉಳಿತಾಯಗಳ ಹಿಂದೆ ಇರುವ ನಾನಾ ಬಗೆಯ ಉದ್ದೇಶಗಳನ್ನು ಕುರಿತು ಅರ್ಥಶಾಸ್ತ್ರಜ್ಞರು ದೀರ್ಘವಿವೇಚನೆ ನಡೆಸಿದ್ದಾರೆ. ದೀರ್ಘ ಭವಿಷ್ಯದಲ್ಲಿ ಉದ್ಭವಿಸುವ ಅಗತ್ಯಗಳ ಪೂರೈಕೆಗಾಗಿ ಸಾಮಾನ್ಯವಾಗಿ ಎಲ್ಲರೂ ಉಳಿತಾಯ ಮಾಡುತ್ತಾರೆ. ಮುಪ್ಪಡಸಿ, ಸಂಪಾದನೆಯ ಶಕ್ತಿ ಕುಂದಿ, ವರಮಾನ ಕಡಿಮೆಯಾದಾಗ ಅಥವಾ ನಿಂತೇ ಹೋದಾಗ ಜೀವನ ಭರಿಸುವ ಸಲುವಾಗಿಯೋ ಮಕ್ಕಳ ವಿದ್ಯಾಭ್ಯಾಸ, ಮದುವೆ ಮುಂತಾದವಕ್ಕಾಗಿಯೋ ಮಾಡಿದ್ದು ಈ ಬಗೆಯ ದೀರ್ಘಕಾಲಿಕ ಉಳಿತಾಯ. ಅನತಿದೂರಕಾಲದಲ್ಲೇ ಹೆಚ್ಚು ಬೆಲೆಯ ವಸ್ತುಗಳನ್ನು ಕೊಳ್ಳುವ ಉದ್ದೇಶದಿಂದಲೂ ಉಳಿತಾಯ ಮಾಡುವುದು ಸಾಮಾನ್ಯವಾಗಿದೆ. ಸರ್ಕಾರ ನಿರ್ವಹಿಸುತ್ತಿರುವ ನಾನಾ ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳಿಂದಲೂ ನಾನಾ ವ್ಯಾಪಾರ ಸಂಸ್ಥೆಗಳು ನೀಡುತ್ತಿರುವ ಕಂತಿನ ಮಾರಾಟ ಸೌಲಭ್ಯದಿಂದಲೂ ಈ ಉದ್ದೇಶ ಸ್ವಲ್ಪ ಕುಂಠಿತವಾಗಿದೆಯೆನ್ನಬಹುದು.

	ಭವಿಷ್ಯದಲ್ಲಿ ಸಂಭವಿಸಬಹುದಾದ ಆಕಸ್ಮಿಕ ಘಟನೆಗಳಿಂದಾಗಿ ವರಮಾನ ಕಡಿಮೆಯಾಗಬಹುದು: ಜೊತೆಗೆ ಇವುಗಳಿಂದಾಗಿ ವೆಚ್ಚ ಹೆಚ್ಚಬಹುದು. ಇಂಥ ಸಂದರ್ಭಗಳನ್ನೆದುರಿಸಲು ಈಗಿನಿಂದಲೇ ಉಳಿತಾಯ ಮಾಡಬೇಕು ಎಂಬ ಉದ್ದೇಶದಿಂದಲೂ ಉಳಿತಾಯ ಕಾರ್ಯ ಜರುಗುತ್ತದೆ. ಉದಾ: ಕುಟುಂಬದಲ್ಲಿ ಮುಖ್ಯವಾಗಿ ಸಂಪಾದನೆಮಾಡುತ್ತಿದ್ದ ವ್ಯಕ್ತಿ ಯಾವುದಾದರೂ ಅಪಘಾತಕ್ಕೆ ತುತ್ತಾಗಿ ಸಂಪಾದನೆ ಮಾಡುವ ಶಕ್ತಿ ಕಳೆದುಕೊಳ್ಳಬಹುದು. ಮುಂದೆ ಸ್ಥಿತಿ ಉತ್ತಮಗೊಳ್ಳುವವರೆಗೂ ಅವನ ಮತ್ತು ಸಂಸಾರದ ಪೋಷಣೆಗೆ ಉಳಿತಾಯ ಮಾಡಿದ ಹಣವಿಲ್ಲದಿದ್ದರೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಅನೇಕರು ಇದನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಮಾಡುತ್ತಾರೆ. ಇದಲ್ಲದೆ ಕುಟುಂಬದಲ್ಲಿ ಕೆಲವರು ಒಂದೇ ಸಮನೆ ಅನಾರೋಗ್ಯದಿಂದ ನರಳುವ ಪರಿಸ್ಥಿತಿ ಬರಬಹುದು. ಅಂಥ ಸಮಯದಲ್ಲಿ ಉಳಿತಾಯದ ಹಣವಿದ್ದರೆ ಬಹಳ ಅನುಕೂಲ ಎಂಬ ಭಾವನೆಯಿಂದ ಉಳಿತಾಯ ಸಾಗುತ್ತದೆ.

	ಉಳಿತಾಯ ಮಾಡುವುದರಿಂದ ಮುಂದೆ ಅಧಿಕ ವರಮಾನ ಪಡೆದು ಸುಖಜೀವನ ನಡೆಸಬಹುದು ಎಂಬ ಆಶೆಯೂ ಅನೇಕರಲ್ಲಿ ಇರುತ್ತದೆ. ತಾನು ಉಳಿಸಿದ ಹಣದಿಂದ ಒಂದು ಹೊಸ ವ್ಯಾಪಾರ ತೆರೆಯಬಹುದು. ವರಮಾನ ಬರುವಂಥ ಇನ್ನಾವುದಾದರೂ ರೂಪದಲ್ಲಿ ಆಸ್ತಿ ಮಾಡಬಹುದು ಎಂಬ ನಿರೀಕ್ಷೆ ಇರುವುದುಂಟು. ಆಸ್ತಿ ಮಾಡಲು ಅಥವಾ ವ್ಯಾಪಾರಮಾಡಲು ಸಾಧ್ಯವಾಗದೆ ಹೋದರೂ ತಾನು ಉಳಿಸಿದ ಹಣದಿಂದ ಬಡ್ಡಿ ಸಂಪಾದಿಸಬಹುದು ಎಂಬ ಖಾತರಿಯಾದರೂ ಇರುತ್ತದೆ. ಅದಕ್ಕಾಗಿಯಾದರೂ ಅನೇಕರು ಉಳಿತಾಯ ಮಾಡುತ್ತಾರೆ.

	ಆಸ್ತಿ ಸಂಪಾದಿಸಿದರೆ ಅಥವಾ ಹಣವನ್ನು ಉಳಿತಾಯ ಮಾಡಿ ಅದರ ಮೂಲಕ ವರಮಾನ ಹೆಚ್ಚಿಸಿಕೊಂಡರೆ ತಮಗೆ ಸಮಾಜದಲ್ಲಿ ಗೌರವಸ್ಥಾನ ದೊರೆಯುತ್ತದೆಂಬುದೂ ಉಳಿತಾಯದ ಹಿಂದಿರುವ ಇನ್ನೊಂದು ಉದ್ದೇಶ.

	ಈ ಉದ್ದೇಶವನ್ನು ಪರಿಶೀಲಿಸಿದಾಗ ಒಂದು ವಿಷಯ ಎದ್ದು ಕಾಣುತ್ತದೆ. ಉಳಿತಾಯವೆಂಬುದು ಪ್ರಕೃತದ ಕ್ರಿಯೆ. ಇದರ ಹಿಂದಿನ ಉದ್ದೇಶ-ಪ್ರೇರಣೆ-ಭವಿಷ್ಯಕ್ಕೆ ಸಂಬಂಧಿಸಿದ್ದು. ಮುಂದೆ ತನ್ನ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದಲೇ ಈಗ ತನಗೆ ಬರುವ ವರಮಾನದಲ್ಲಿ ವ್ಯಕ್ತಿ ಸ್ವಲ್ಪ ಭಾಗ ಉಳಿತಾಯ ಮಾಡಲು ಯತ್ನಿಸುತ್ತಾನೆ.

ಉಳಿತಾಯ ಪ್ರವೃತ್ತಿ : ಮುಂದಿನ ಸೌಲಭ್ಯಕ್ಕಾಗಿ ಇಂದು ಪಡೆಯಬಹುದಾದ ಸೌಲಭ್ಯಗಳ ತ್ಯಾಗ ಮಾಡಬೇಕೆಂಬುದು ಉಳಿತಾಯದ ಅವಿಭಾಜ್ಯ ಷರತ್ತಾದರೂ ಅದಕ್ಕೆ ಅಷ್ಟೇ ಸಾಲದು. ಒಬ್ಬ ವ್ಯಕ್ತಿ ತನ್ನ ಮುಂದಿನ ಉಪಯೋಗಕ್ಕಾಗಿ ಇಂದು ಉಳಿತಾಯ ಮಾಡಬೇಕೆಂಬ ಆಸೆ ಇಟ್ಟುಕೊಂಡಿರಬಹುದು. ಆದರೆ ಮುಂದೆ ತನ್ನ ಜೀವನ ನಡೆಸಲು ಸರ್ಕಾರ ಕೆಲವು ಸೌಕರ್ಯಗಳನ್ನು ಕಲ್ಪಿಸಿದೆಯೆಂಬುದನ್ನು ಅರಿತೊಡನೆಯೆ ಆತ ಉಳಿತಾಯ ಮಾಡದೆ ಹೋಗಬಹುದು. ಆದ್ದರಿಂದ ಉಳಿತಾಯ ಮಾಡಬೇಕಾದರೆ ವ್ಯಕ್ತಿಯಲ್ಲಿ ಉಳಿತಾಯದ ಒಲವು ಅಥವಾ ಪ್ರವೃತ್ತಿಯೂ ಇರಬೇಕು. ಭವಿಷ್ಯತ್ತಿನ ಚಿಂತನೆಯೊಂದರಿಂದಲೇ ಈ ಉಳಿತಾಯ ಪ್ರವೃತ್ತಿ ಉದ್ಭವಿಸುವುದಿಲ್ಲ. ಸಾಮಾಜಿಕ ರಾಜಕೀಯ ಆರ್ಥಿಕ ಮಾನಸಿಕವಾದ ನಾನಾ ಪ್ರವೃತ್ತಿಗಳು ಇದನ್ನು ನಿಯಂತ್ರಿಸುತ್ತಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಈಗಿನ ವರಮಾನ ಮತ್ತು ಮುಂದೆ ಅವನಿಗೆ ಬರಬಹುದಾದ ವರಮಾನ, ಸಮಾಜದ ಸ್ಥಿತಿಗತಿ ಇವೆಲ್ಲ ಆತನ ಉಳಿತಾಯದ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಉಳಿತಾಯಕ್ಕೆ ಶಕ್ತಿ-ಪ್ರವೃತ್ತಿಗಳೆರಡೂ ಮುಖ್ಯವೆನ್ನಬಹುದು.

	ಒಂದು ಸಮಾಜದಲ್ಲಿ ಉಳಿತಾಯ ಪ್ರವೃತ್ತಿ ವಿವಿಧರೀತಿಯ ಜನರಲ್ಲಿ ವಿವಿಧ ರೂಪದಲ್ಲಿ ಇರುತ್ತದೆ. ಅಧಿಕ ವರಮಾನ ಪಡೆಯುವವರು ಅನೇಕ ಸಂದರ್ಭಗಳಲ್ಲಿ ಕಡಿಮೆ ವರಮಾನ ಬರುವವರಿಗಿಂತ ಹೆಚ್ಚು ಉಳಿತಾಯ ಮಾಡುವ ಮನೋಭಾವ ಹೊಂದಿರುತ್ತಾರೆ. ತಾವು ಉಳಿತಾಯ ಮಾಡಿದ ಹಣವನ್ನು ಸರಿಯಾದ ಕಡೆ ಇಟ್ಟು ಅದರಿಂದ ವರಮಾನ ಪಡೆಯುವ ವಿಧಾನಗಳನ್ನು ತಿಳಿದುಕೊಂಡಿರುತ್ತಾರೆ. ತಮ್ಮ ಉಳಿತಾಯವನ್ನು ಭದ್ರವಾಗಿ ಇಡುವ ವಿಧಾನ ಅವರಿಗೆ ಗೊತ್ತಿರುತ್ತದೆ. ಉಳಿತಾಯ ಮಾಡುವುದರಿಂದ ಸಮಾಜದಲ್ಲಿ ಯಾವ ರೀತಿ ಗೌರವ ಮತ್ತು ಅಧಿಕಾರ ಪಡೆಯಬಹುದು ಎಂಬುದನ್ನೂ ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಅವರಿಗೆ ತಮ್ಮ ನಿತ್ಯಜೀವನ ಸಾಗಿಸಲು ಬೇರೆ ಅನೇಕ ಸೌಕರ್ಯಗಳಿರುವುದರಿಂದ ಅವರಲ್ಲಿ ಉಳಿತಾಯ ಶಕ್ತಿ ಹೆಚ್ಚು. ಆದ್ದರಿಂದ ಇಂಥವರಲ್ಲಿ ಉಳಿತಾಯ ಪ್ರವೃತ್ತಿ ಅಧಿಕವಾಗಿರುವುದರಲ್ಲಿ ಆಶ್ಚರ್ಯವಿಲ್ಲ.

	ಗ್ರಾಮಸ್ಥರಿಗೂ ಪಟ್ಟಣಿಗರಿಗೂ ಒಂದು ವೇಳೆ ಒಂದೇ ಮಟ್ಟದ ವರಮಾನ ಬರುತ್ತಿದ್ದರೂ ಪಟ್ಟಣಿಗರಿಗಿಂತ ಗ್ರಾಮಸ್ಥರಲ್ಲಿ ಉಳಿತಾಯ ಪ್ರವೃತ್ತಿ ಹೆಚ್ಚಾಗಿರುತ್ತದೆ. ಇದಕ್ಕೆ ಅನೇಕ ಕಾರಣಗಳುಂಟು. ಗ್ರಾಮಾಂತರ ಪ್ರದೇಶದವರ ವರಮಾನ ಪಟ್ಟಣಿಗರದಕ್ಕಿಂತ ಹೆಚ್ಚು ಅನಿಶ್ಚಿತ. ಆದ್ದರಿಂದ ಅವರು ಹೆಚ್ಚು ಉಳಿತಾಯ ಮಾಡುವುದು ಅನೇಕವೇಳೆ ಅನಿವಾರ್ಯ. ತಮ್ಮ ಉಳಿತಾಯದಿಂದ ವರಮಾನ ಹೆಚ್ಚಿಸಿಕೊಳ್ಳಲು ಅವರಿಗೆ ಅನೇಕ ಅವಕಾಶಗಳಿವೆ. ಜಮೀನುಗಳನ್ನು ಹೊಸದಾಗಿ ಕೊಳ್ಳಬಹುದು: ಹೊಸ ಜಾನುವಾರುಗಳನ್ನು ಮತ್ತು ವ್ಯವಸಾಯ ಉಪಕರಣಗಳನ್ನು ಕೊಂಡು ತಮ್ಮ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳಬಹುದು. ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಆಸ್ತಿ ಮಾಡಿಕೊಂಡರೂ ಸಮಾಜದಲ್ಲಿ ಹೆಚ್ಚಿಗೆ ಮನ್ನಣೆ ದೊರೆಯುತ್ತದೆ. ಇಷ್ಟೇ ಅಲ್ಲ. ಅವರ ಜೀವನಮಟ್ಟ ಸರಳವಾಗಿರುವುದರಿಂದ ಅವರು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

	ಉಳಿತಾಯ ಮಾಡಬೇಕೆಂಬ ಮನಸ್ಸು ಜನರಲ್ಲಿ ಮೂಡುವುದಕ್ಕೆ ಕಾರಣವಾಗಿ ಇನ್ನೂ ಅನೇಕ ಅಂಶಗಳಿವೆ. ವಿವೇಕ, ದೂರದೃಷ್ಟಿ, ಸಾಂಸಾರಿಕ ಕರ್ತವ್ಯದ ಬಗ್ಗೆ ಶ್ರದ್ಧೆ ಇತ್ಯಾದಿ ವೈಯಕ್ತಿಕ ಗುಣಗಳು ಉಳಿತಾಯ ಮಾಡುವುದರಲ್ಲಿ ಮುಖ್ಯವಾಗಿ ಇರಬೇಕು. ಸಂಸಾರದ ಭವಿಷ್ಯ ಬೇಡಿಕೆಗಳಿಗೋಸ್ಕರ ಉಳಿತಾಯ ಮಾಡಬೇಕೆನ್ನುವ ಹಾಗೆಯೇ ಸಾಮಾನ್ಯ ವ್ಯಾಪಾರ ವ್ಯವಹಾರ ನಡೆಯಿಸುವುದಕ್ಕೂ ವಿಶೇಷ ಲಾಭಾಕಾಂಕ್ಷೆಯಿಂದ ಸಟ್ಟಾ ವ್ಯಾಪಾರ ಮಾಡುವುದಕ್ಕೂ ಉಳಿತಾಯ ಮಾಡುವ ಮನಸ್ಸಾಗುವುದೂ ಉಂಟು.

	ಉಳಿತಾಯ ಶಕ್ತಿ ಒಂದು ದೇಶದ ಜನರ ವರಮಾನವನ್ನೇ ಅವಲಂಬಿಸಿರುತ್ತದೆ. ಅಧಿಕ ವರಮಾನವಿದ್ದಷ್ಟೂ ಉಳಿತಾಯ ಶಕ್ತಿ ಹೆಚ್ಚುತ್ತ ಹೋಗುತ್ತದೆ. 

ಉಳಿತಾಯಕ್ಕೆ ತಕ್ಕ ವಾತಾವರಣ : ಜನರಲ್ಲಿ ಉಳಿತಾಯ ಮನೋಭಾವ ಮತ್ತು ಉಳಿತಾಯ ಶಕ್ತಿ ಇದ್ದರೂ ಅವರು ಉಳಿತಾಯ ಮಾಡುವಂತೆ ಮಾಡಲು ಪ್ರೇರೇಪಿಸುವ ಪರಿಸ್ಥಿತಿಯೂ ದೇಶದಲ್ಲಿರಬೇಕು. ತಾವು ಈಗ ಉಳಿತಾಯ ಮಾಡಿದ ವರಮಾನ ಮುಂದೆ ತಮಗೆ ಅವಶ್ಯಕವೆನಿಸಿದಾಗ ಉಪಯೋಗಕ್ಕೆ ದೊರೆಯುತ್ತದೆ ಎಂಬ ಭರವಸೆ ಇರಬೇಕು. ಇಂಥ ಭರವಸೆ ಜನರಿಗೆ ಉಂಟಾಗಬೇಕಾದರೆ ದೇಶದಲ್ಲಿ ಸುಭದ್ರ ಸರ್ಕಾರ ಇರಬೇಕು. ಜನ ಉಳಿಸಿದ ಹಣವನ್ನು ಸುಭದ್ರವಾಗಿ ಇಡಲು ಬ್ಯಾಂಕುಗಳು ಉಪಯೋಗಕ್ಕೆ ಬರುತ್ತವೆ. ಕೆಲವರು ಉಳಿಸಿದ ವರಮಾನವನ್ನು ಆಸ್ತಿಪಾಸ್ತಿ ಕೊಳ್ಳವುದಕ್ಕಾಗಿ ಉಪಯೋಗಿಸುತ್ತಾರೆ. ಆಸ್ತಿಪಾಸ್ತಿ ಮಾಡಿದರೆ ಮುಂದೆ ತಮ್ಮ ಮತ್ತು ತಮ್ಮ ಮಕ್ಕಳ ಉಪಯೋಗಕ್ಕೆ ಬರುತ್ತದೆ ಎಂಬ ಭರವಸೆಯೇ ಈ ಬಗೆಯ ಉಳಿತಾಯಕ್ಕೆ ಆಧಾರ. ಆದ್ದರಿಂದ ಸರ್ಕಾರ ಜನರ ಖಾಸಗಿ ಸ್ವತ್ತಿಗೆ ರಕ್ಷಣೆ ಕೊಡುವಂತಿರಬೇಕು. ಬ್ಯಾಂಕುಗಳಲ್ಲಿ ಇಟ್ಟ ಹಣ ಜನರಿಗೆ ಖಂಡಿತ ವಾಪಸ್ಸು ದೊರಕುತ್ತದೆ ಎಂಬ ಭಾವನೆ ಮೂಡಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತಾನು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬ ಭರವಸೆ ಇರಬೇಕು. ಇದಕ್ಕೆ ತಕ್ಕ ವಾತಾವರಣವನ್ನು ಸರ್ಕಾರ ಕಲ್ಪಿಸಿಕೊಡಬೇಕು. ಸರ್ಕಾರ ಜನರಿಗೆ ಎಲ್ಲ ವಿಧವಾದ ಸೌಕರ್ಯಗಳನ್ನೂ ಕಲ್ಪಿಸಿಕೊಡುವಂಥ ಶಕ್ತಿ ಉಳ್ಳದ್ದಾಗಿರಬೇಕು. ಬ್ಯಾಂಕುಗಳ ಮತ್ತು ಇತರ ಹಣಕಾಸಿನ ಸಂಸ್ಥೆಗಳ ಸೌಲಭ್ಯಗಳನ್ನು ದೇಶದ ಎಲ್ಲ ಕಡೆಯೂ ಕಲ್ಪಿಸುವುದೂ ಅಗತ್ಯ. ಇದರಿಂದ ಉಳಿತಾಯ ಮಾಡಲು ಜನರನ್ನು ಪ್ರೇರೇಪಿಸಿದಂತಾಗುತ್ತದೆ.

	ಬಡ್ಡಿಯ ದರ: ಇಷ್ಟೇ ಮುಖ್ಯವಾಗಿ ಈಗಿನ ಸಮಾಜದಲ್ಲಿ ಉಳಿತಾಯಕ್ಕೆ ಪ್ರೇರೇಪಣೆ ಮಾಡುವುದು ಬಡ್ಡಿಯ ದರ. ಈಗಿನ ವಾತಾವರಣದಲ್ಲಿ ಅನೇಕರು ತಾವು ಉಳಿಸಿದ ವರಮಾನವನ್ನು ತಮ್ಮ ಹತ್ತಿರವೇ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ತಾವು ಉಳಿತಾಯ ಮಾಡಿದ ವರಮಾನ ಮುಂದೆ ತಮ್ಮ ಉಪಯೋಗಕ್ಕೆ ಬರುವ ತನಕ ಅದನ್ನು ಬೇರೆಯವರ ಉಪಯೋಗಕ್ಕೆ ಕೊಟ್ಟು ಲಾಭ ಸಂಪಾದಿಸಲು ಪ್ರಯತ್ನಿಸುತ್ತಾರೆ. ಸಮಾಜದಲ್ಲಿ ಬಡ್ಡಿಯ ದರ ಬಹಳ ಕಡಿಮೆ ಇದ್ದರೆ ಅನೇಕರು ಉಳಿತಾಯ ಮಾಡುವ ಗೋಜಿಗೇ ಹೋಗುವುದಿಲ್ಲ. ಸಾಲ ಕೊಟ್ಟು ಕಡಿಮೆ ಬಡ್ಡಿದರ ಸಂಪಾದಿಸುವ ಬದಲು ಉಳಿತಾಯ ಮಾಡುವುದೇ ಬೇಡ ಎಂಬ ಮನೋಧರ್ಮವನ್ನು ಅನೇಕರು ತಾಳುತ್ತಾರೆ. ಆದರೆ ಸಮಾಜದ ದೃಷ್ಟಿಯಿಂದ ಉಳಿತಾಯ ಅಗತ್ಯ. ಆದ್ದರಿಂದ ಉಳಿತಾಯ ಮಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕಾದರೆ ಆಕರ್ಷಕವಾದ ಬಡ್ಡಿ ದರವನ್ನು ದೊರಕಿಸಿಕೊಡುವುದು ಅತ್ಯಾವಶ್ಯಕ. ಸ್ವತಂತ್ರ ಸಮಾಜದಲ್ಲಿ ಇತರ ಪದಾರ್ಥಗಳ ಬೆಲೆಗಳಂತೆ ಹಣದ ಮೇಲಣ ಬಡ್ಡಿಯ ದರವೂ ಅದಕ್ಕಿರುವ ಬೇಡಿಕೆ ಹಾಗೂ ಸರಬರಾಜುಗಳನ್ನೇ ಅವಲಂಬಿಸಿರುತ್ತದೆ. ಬಡ್ಡಿಯು ಆಕರ್ಷಕವಾಗಿದ್ದರೆ ಶ್ರೀಮಂತರಿಂದ ಹಿಡಿದು ತೀರ ಬಡವರ್ಗದವರೆಗಿನ ಎಲ್ಲ ಜನರೂ ತಮ್ಮ ಶಕ್ತ್ಯಾನುಸಾರ ಉಳಿತಾಯ ಮಾಡಲು ಯತ್ನಿಸುತ್ತಾರೆ. ಇದರಿಂದ ಸಮಾಜದಲ್ಲಿ ಉಳಿತಾಯ ಹೆಚ್ಚಾಗಲು ಕಾರಣವಾಗುತ್ತದೆ.

ಭಾರತದಲ್ಲಿ : ಉಳಿತಾಯಕ್ಕೆ ಉತ್ತೇಜನ ನೀಡಲು ಬಲು ಹಿಂದಿನಿಂದಲೂ ಅನೇಕ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಅಂಚೆ ಕಚೇರಿಗಳು ಬಹಳ ಕಾಲದಿಂದಲೂ ಉಳಿತಾಯ ಬ್ಯಾಂಕುಗಳ ಕೆಲಸ ನಿರ್ವಹಿಸುತ್ತಿವೆ. ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡಿದವರಿಗೂ ಭದ್ರತೆ ಒದಗಿಸಲು ಅಂಚೆ ಕಚೇರಿಗಳು ಈ ಕಾರ್ಯಕೈಗೊಂಡುವು. ಇವು ಸರ್ಕಾರದ ಅಧೀನದಲ್ಲಿರುವುದರಿಂದ ಜನರಿಗೆ ತಮ್ಮ ಹಣದ ಭದ್ರತೆಯ ವಿಷಯದಲ್ಲಿ ಯಾವ ಅಂಜಿಕೆಯೂ ಇರುವುದಿಲ್ಲವೆಂಬ ಕಾರಣದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಯಿತು.

	ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರಿಂದ ಉಳಿತಾಯ ಶೇಖರಿಸಲು ಗ್ರಾಮಾಂತರ ಪ್ರದೇಶಗಳಲ್ಲಿ ಬ್ಯಾಂಕುಗಳನ್ನು ಸ್ಥಾಪಿಸುವ ಕಾರ್ಯ ಆರಂಭವಾಗಿದೆ. ಸ್ಟೇಟ್ ಬ್ಯಾಂಕು, ವಿವಿಧ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು ಈ ದೃಷ್ಟಿ ಇಟ್ಟುಕೊಂಡೇ ತಮ್ಮ ಶಾಖೆಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾರಂಭಿಸುತ್ತಿವೆ.

	ಇದಲ್ಲದೆ ಜನರು ಉಳಿತಾಯ ಮಾಡಿದ ಹಣವನ್ನು ಸಮಾಜದ ಉಪಯೋಗಕ್ಕಾಗಿ ದೊರಕಿಸಿಕೊಳ್ಳಲು ಜೀವವಿಮಾ ಕಾರ್ಪೊರೇಷನ್ ಅನೇಕ ರೀತಿಯ ಕ್ರಮಕೈಗೊಂಡಿದೆ. ಕಡಿಮೆ ವರಮಾನ ಬರುವ ವರ್ಗದವರೂ ಜೀವವಿಮೆಯಲ್ಲಿ ಹಣ ತೊಡಗಿಸುವುದರ ಮೂಲಕ ತಮ್ಮ ಉಳಿತಾಯವನ್ನು ಭದ್ರವಾಗಿ ಕಾಪಾಡಿಕೊಳ್ಳಬಹುದಾಗಿದೆಯಲ್ಲದೆ ಭವಿಷ್ಯವನ್ನು ಸುರಕ್ಷಿಸಬಹುದಾಗಿದೆ.

	ಕೆಲವು ಜನ ತಮಗೆ ಅವಕಾಶ ದೊರೆತಾಗ ಉಳಿತಾಯ ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ತಮಗೆ ತೊಂದರೆ ಒದಗಿದಾಗ ತಾವು ಉಳಿತಾಯ ಮಾಡಿದ ಹಣವನ್ನು ಸುಲಭವಾಗಿ ವಾಪಸು ತೆಗೆದುಕೊಳ್ಳುವಂತಿರಬೇಕು ಎಂಬ ಅಭಿಲಾಷೆ ಇರುತ್ತದೆ. ಜೊತೆಗೆ ಉಳಿತಾಯ ಬ್ಯಾಂಕುಗಳಲ್ಲಿ ತಮ್ಮ ಉಳಿತಾಯವನ್ನು ಇಟ್ಟರೆ ದೊರೆಯುವ ಬಡ್ಡಿ ದರಕ್ಕಿಂತ ಹೆಚ್ಚಿಗೆ ಸಂಪಾದಿಸಬೇಕು ಎನ್ನುವ ಅಭಿಲಾಷೆ ಕೂಡ ಇರುವುದುಂಟು. ಇಂಥ ವರ್ಗದ ಜನರ ಉಳಿತಾಯವನ್ನೂ ಸಮಾಜದ ಹಿತಕ್ಕಾಗಿ ಉಪಯೋಗಿಸಿಕೊಳ್ಳಲು ಯೂನಿಟ್ ಟ್ರಸ್ಟ್ ಸ್ಥಾಪಿತವಾಗಿದೆ.

ಉಳಿತಾಯದ ಉಪಯೋಗ ಮತ್ತು ಮಹತ್ತ್ವ : ಉಳಿತಾಯ ಒಂದು ಸಮಾಜದ ಆರ್ಥಿಕಾಭಿವೃದ್ಧಿಗೆ ಅತ್ಯಾವಶ್ಯಕ. ಉಳಿತಾಯವಿಲ್ಲದಿದ್ದರೆ ಆ ಸಮಾಜದಲ್ಲಿ ಬಂಡವಾಳ ಕೂಡುವುದಿಲ್ಲ. ಬಂಡವಾಳ ಶೇಖರಣೆಯಾಗದಿದ್ದರೆ ಆರ್ಥಿಕಾಭಿವೃದ್ಧಿಯಾಗುವುದಿಲ್ಲ. ಆದ್ದರಿಂದ ಒಂದು ದೇಶದ ಆರ್ಥಿಕಾಭಿವೃದ್ಧಿಗೆ ಉಳಿತಾಯ ಬಹುಮುಖ್ಯವಾದ ಮತ್ತು ಸಹಾಯಕಾರಿಯಾದ ಅಂಶ ಎಂದು ಹೇಳಬಹುದು.

	ಈಗ ಪ್ರಪಂಚದಲ್ಲಿ ಆರ್ಥಿಕಾಭಿವೃದ್ಧಿ ಸಾಧಿಸಿರುವ ಪಾಶ್ಚಾತ್ಯ ದೇಶಗಳ ಇತಿಹಾಸವನ್ನು ನೋಡಿದರೆ ಉಳಿತಾಯದ ಪ್ರಭಾವ ಕಂಡುಬರುತ್ತದೆ. ಆದ್ದರಿಂದಲೇ ಉಳಿತಾಯವನ್ನು ಹೆಚ್ಚಿಸಲು ಹಿಂದುಳಿದ ದೇಶಗಳಲ್ಲಿ ಸತತ ಪ್ರಯತ್ನಮಾಡಲಾಗುತ್ತಿದೆ. ಆರ್ಥಿಕ ಚಟುವಟಿಕೆಗಳ ಏರಿಳಿತಗಳಿಗೂ ಉಳಿತಾಯದ ಏರಿಳಿತಗಳೇ ಕಾರಣ. ಸಾಕಷ್ಟು ಉಳಿತಾಯ ದೊರೆಯದೆ ಹೋದರೆ ಸಮಾಜದಲ್ಲಿ ಬಂಡವಾಳದ ಅಭಾವ ಉಂಟಾಗಿ ಆರ್ಥಿಕ ಕ್ಷೇತ್ರದಲ್ಲಿ ತೊಂದರೆಗಳು ಉದ್ಭವಿಸುತ್ತವೆ. ಇದೇ ರೀತಿ ಹಣದ ಉಳಿತಾಯ ಹೆಚ್ಚಾಗಿ ಅದು ಬಂಡವಾಳವಾಗಿ ನಿಯೋಜನೆಯಾಗದೆ ಹೋದರೆ ಆಗಲೂ ಸಮಸ್ಯೆಗಳು ತಲೆದೋರುತ್ತವೆ. ವ್ಯಾಪಾರ ಚಕ್ರದ ಏರು-ತಗ್ಗುಗಳ ಹಿಂದೆ ಉಳಿತಾಯದ ಉಬ್ಬು-ತಗ್ಗುಗಳನ್ನು ಕಾಣಬಹುದಾಗಿದೆ. ಆದುದರಿಂದ ಎಲ್ಲ ದೇಶಗಳಲ್ಲೂ ಈಗ ಉಳಿತಾಯವನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ನಿಯಂತ್ರಿಸಲು ಸತತ ಪ್ರಯತ್ನ ಮಾಡಲಾಗುತ್ತಿದೆ.		 		
	 (ಎಸ್.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ